Thursday, February 14, 2013

ನೀನು ಮುಗಿಲು ನಾನು ನೆಲ

Valentine's Day Special - ನಾನು ನೀನು , ನೀನು ನಾನು
Lyrics - Dr. G S Shivarudrappa

Version 1
Link - http://www.kannadaaudio.com/Songs/Bhaavageethe/Haadu-Haleyadaadarenu-2/Neenu.ram )Music - C Ashwath, Singer - Rathnamala Prakash)

Version 2
Link - http://www.kannadaaudio.com/Songs/Bhaavageethe/Navodaya-GS-Shivarudrappa/Neenu.ram (Music - Padma Charan, Singer - Rathnamala Prakash)

ನೀನು ಮುಗಿಲು ನಾನು ನೆಲ
ನಿನ್ನ ಒಲವೆ ನನ್ನ ಬಲ
ನಮ್ಮಿಬ್ಬರ ಮಿಲನದಿಂದ ಉಲ್ಲಾಸವೇ ಶ್ಯಾಮಲಾ

ನಾನು ಎಳೆವೆ ನೀನು ಮಣಿವೆ
ನಾನು ಕರೆವೆ ನೀನು ಸುರಿವೆ
ನಮ್ಮಿಬ್ಬರ ಒಲುಮೆ  ನಲುಮೆ ಜಗಕಾಯಿತು ಹುಣ್ಣಿಮೆ
ನಾನಚಲದ ತುಟಿಯೆತ್ತುವೆ
ನೀ ಮಳೆಯೊಲು ಮುತ್ತನಿಡುವೆ
ನಿನ್ನಿಂದಲೇ ತೆರೆವುದೆನ್ನ ಚೈತನ್ಯದ ಕಣ್ಣೆವೆ

ಸೂರ್ಯ ಚಂದ್ರ ಚಿಕ್ಕೆಗಣ್ಣ
ತೆರೆದು ನೀನು ಸುರಿವ ಬಣ್ಣ
ಹಸಿರಾಯಿತು ಹೂವಾಯಿತು ಚೆಲುವಾಯಿತು ಈ ನೆಲ
ನೀನು ಗಂಡು ನಾನು ಹೆಣ್ಣು
ನೀನು ರೆಪ್ಪೆ ನಾನು ಕಣ್ಣು
ನಮ್ಮಿಬ್ಬರ ಮಿಲನದಿಂದ ಸುಫಲವಾಯ್ತು ಜೀವನ

Wednesday, February 13, 2013

ನೀನು ಮಾಮರವಾದೆ ನಾನು ಆಗಿಹೆ ಕೋಗಿಲೆ

Valentine's Day Special - ನಾನು ನೀನು , ನೀನು ನಾನು
Lyrics - M N Vyasa Rao
Music - Upasana Mohan
Singer - Archana Udupa
Link - http://www.kannadaaudio.com/Songs/Bhaavageethe/Neenillade-Nanagenide/Neenu.ram

ನೀನು ಮಾಮರವಾದೆ ನಾನು ಆಗಿಹೆ ಕೋಗಿಲೆ
ನೂರು ಸ್ವರವನು ತೆರೆದು ಹಾಡಿದೆ ನಿನ್ನ ಪ್ರೀತಿಯ ನೆರಳಲಿ

ಪ್ರೀತಿ ನುಡಿಗಳು ಅರಳಿ ಬಂದವು ಮೊದಲ ಬಾರಿಗೆ ತುಟಿಯಲಿ
ಎದೆಯ ಆಳದ ಭಾವ ಬಿರಿದವು ಕನಸಿನಂಗಳ ತೋಟದಿ

ಜೀವ ರಸವನು ಹರಿಸಿ ಯಾವುದೊ ನದಿಯು ನನ್ನಲಿ ಸೇರಿತು
ಯಾವ ಮಧುವಿನ ಯಾವ ತುಟಿಯೊ ಹಲವು ಬಣ್ಣವ ತೆರೆಸಿತು

ನೀನೆ ಮಾಮರ ನಾನೆ ಕೋಗಿಲೆ ಹೃದಯ ಒಲವಿನ ಬಾಗಿಲು
ಅಮರವಾಗಿದೆ ಪ್ರೇಮ ಜಗದೊಳು ಸತತ ಹರಿಯುತ ಈಗಲು

Tuesday, February 12, 2013

ನಾನು ಸರಸಿ ನೀನು ಅರಸ

Valentine's Day Special - ನಾನು ನೀನು , ನೀನು ನಾನು
Lyrics - Dr. Da Ra Bendre
Music - Yashavantha Halibindi
Singer - Sangeetha Katti
Link - http://www.kannadaaudio.com/Songs/Bhaavageethe/PatharagittiPakka/Naanu.ram

ನಾನು ಸರಸಿ ನೀನು ಅರಸ
ಆಳಿ ನೋಡ ಬಾ
ನಾನು ನೀರೆ ನೀನು ನಲ್ಲ
ಬಾಳಿ ನೋಡ ಬಾ

ನಾನು ಹಣ್ಣು ನೀನು ಗಿಣಿಯು
ಕುದುಕಿ ನೋಡ ಬಾ
ನಾನು ಗೆಳತಿ ನೀನು ಗೆಳೆಯ
ಬದುಕ ಮಾಡ ಬಾ

ನಾನು ನೋಟ ನೀನು ಕಣ್ಣು
ಬೆಳಕ ನೀಡ ಬಾ
ನಾನು ಮಾಯೆ ನೀನು ಈಶ
ಮೋಡಿಯಾಡ ಬಾ

ಗಾಳಿ ನಾನು ಬಾನು ನೀನು
ಮೂಡಿ ನೋಡ ಬಾ
ಗೀತ ನಾನು ಪ್ರೀತ ನೀನು
ಕಟ್ಟಿ ಹಾಡ ಬಾ

Monday, February 11, 2013

ನಾನೆ ವೀಣೆ ನೀನೆ ತಂತಿ

Valentine's Day Special - ನಾನು ನೀನು, ನೀನು ನಾನು
Lyrics - Kuvempu
Music - H K Narayana
Singer - Manjula Gururaj
Link - http://www.kannadaaudio.com/Songs/Bhaavageethe/NaaneVeeneNeeneTanti/Naane.ram

ನಾನೆ ವೀಣೆ ನೀನೆ ತಂತಿ ಅವನೆ ವೈಣಿಕ
ಮಿಡಿದನೆನಲು ರಸದ ಹೊನಲು
ಬಿಂದು ಬಿಂದು ಸೇರಿ ಸಿಂಧು ನಾದ ರೂಪಕ

ಭುವನವೆಲ್ಲ ಸವಿಯ ಸೊಲ್ಲ ಕವಿಯ ಗಾನ
ನನ್ನ ನಿನ್ನ ಹೃದಯಮೀನ
ಕಲ್ಲಿ ಜೇನ ಸೊಗದ ಸ್ನಾನ ಅಮೃತ ಪಾನ

ತಂತಿಯಿಂಚರದಿ ವಿಪಂಚಿ ರಸ ಪ್ರಳಯಿಸೆ
ನನ್ನ ನಿನ್ನ ಜೀವಮಾನ
ತಾನ ತಾನ ತನನ ತಾನ ಪ್ರಾಣ ಪುಳಕಿಸೆ

Friday, February 8, 2013

ಹೊಳೆವ ನೀರ ಮೇಲೆ

Theme - ಬೆಳುದಿಂಗಳು/Beludingalu
Lyrics - Kuvempu
Music - T R Srinivas
Singers - T R Srinivas
Link - http://www.kannadaaudio.com/Songs/Bhaavageethe/JayaBharathaJananiyaTanujaate/Holeva.ram

ಹೊಳೆವ ನೀರ ಮೇಲೆ ಕುಣಿವ ಬೆಳದಿಂಗಳ ಕಿರಣ ರಾಣಿ
ಕುಣಿದು ಕುಣಿದು ದಣಿಯದಿರುವ ನಿಜ್ಜನಗೆಯ ತವರು ಜಾಣಿ

ಸೂರ್ಯ ಲೋಕದಿಂದ ಬಂದು ತಂಪು ಗೀಟು ತಿಂಗಳಿನಲಿ
ಕುಣಿತ ಕಲಿತು ಇಳೆಗೆ ಇಳಿದ ಬೆಳದಿಂಗಳ ಕಿರಣ ರಾಣಿ

ನೀರ ರಂಗದಲ್ಲಿ ನೆಲಸಿ ತೆರೆಯ ತಾಳದೊಡನೆ ಬೆರೆತು
ನೀಲ ನಭದ ತಾರೆ ನೀರೆ ನೋಡುತಿರಲು ಕುಣಿವ ರಾಣಿ

ಎಲ್ಲ ಕಡೆಗು ತುಂಬಿ ತುಳುಕಿ ನೆರವು ಎಂಬ ತೆರದಿ ತೋರಿ
ನಂಬುವವರ ನಲ್ಮೆ ಕಾಂಬ ಹಿಗ್ಗು ಕಡಲ ಕುರುಹು ಜಾಣಿ
 

Thursday, February 7, 2013

ಎಳೆ ಬೆಳುದಿಂಗಳು

Theme - ಬೆಳುದಿಂಗಳು/Beludingalu
Lyrics - Dr. G S Shivarudrappa
Music - C Ashwath
Singers - Rathnamala Prakash & Malathi Sharma
Link  - http://www.kannadaaudio.com/Songs/Bhaavageethe/Haadu-Haleyadaadarenu-3/Ele.ram

ಎಳೆ ಬೆಳುದಿಂಗಳು ಮರದಡಿ ಬರೆದಿದೆ ನೆಳಲಿನ ಚಿತ್ತಾರ
ಬಾನೊಳು ಚದುರಿವೆ ಕಿರು ಮಿರು ತಾರಗೆ ಇರುಳಿನ ಸಿಂಗಾರ

ಸಪ್ತಮಿ ಚಂದ್ರನ ತೃಪ್ತಿಯ ನಗೆಯಲಿ ಬಾನೇ ಬಂಗಾರ
ಇರುಳಿನ ಸ್ತಬ್ಧತೆ ಬರೆದಿದೆ ಕೊರೆದಿದೆ ನಿಶ್ಚಲ ತರುಣಿಕರ

ಪ್ರಶಾಂತ ನಿರ್ಮಲ ಧ್ಯಾನ ದಿಗಂಬರ ಶಾರದ ಯೋಗಿವರ
ಕರುಣೆಯೊಳೆತ್ತಿರೆ ಇರವಿನ ಭಾರವೆ ತಾನಾಗಿದೆ ಹಗುರ

Wednesday, February 6, 2013

ಬಾರಯ್ಯ ಬೆಳದಿಂಗಳೆ

Theme - ಬೆಳುದಿಂಗಳು/Beludingalu
Janapada Geethe
Music - P Kalinga Rao
Singers - P Kalinga Rao, Mohanakumari & Party
Link - http://www.kannadaaudio.com/Songs/Bhaavageethe/BaarayyaBeladingale/Baarayya.ram

ಬಾರಯ್ಯ ಬೆಳದಿಂಗಳೆ ಬಾರಯ್ಯ ಬೆಳದಿಂಗಳೆ
ನಮ್ಮೂರ ಹಾಲಿನಂಥ ಬೆಳದಿಂಗಳೆ

ಒಂದೇ ಹಕ್ಕಿ ಬಂದಾವಕ್ಕಾ ಹರಗರನಾಡಿ ನಿಂದಾವಕ್ಕಾ
ತಾಮಾಲೂರ ಹೋಳೇಯಿಂದ ಕುಂತೂನಿಂತೂ ಬರೂತಿದ್ದಾ
ರಾಮಾನ್ಯಾರೆ ತಡಾದೋರೂ ಭೀಮಾನ್ಯಾರೇ ತಡಾದೋರೂ

ತಿಂಗ್ಳು ತಿಂಗ್ಳೀಗೆ ತಿಂಗಳು ಮಾವನ ಪೂಜೆ ಗರುಡಾನ ಪೂಜೆ ಘನ ಪೂಜೆ
ಕೊಲುಮಲ್ಲಿಗೆ ಕೋಲೇ ಕೊಲುಮಲ್ಲಿಗೆ ಕೋಲೇ
ಗರುಡಾನ ಪೂಜೆ ಘನ ಪೂಜೆ ತಿಂಗಳು ಮಾವಾ ನಿನಪೂಜೆ ಗಂಗೇ ದಿನದಾಗೇ
ಕೋಲುಮಲ್ಲಿಗೆ ಕೋಲೇ ಕೋಲುಮಲ್ಲಿಗೆ ಕೋಲೇ
ತಿಂಗಳುಮಾವನ ತಂಗಿ ಸೂತಕವಾಗಿ ಬೆಂಗೆ ಹೂವಿನ ಗುಡ್ಲಾಗೀ
ಕೋಲುಮಲ್ಲಿಗೆ ಕೋಲೇ ಕೋಲುಮಲ್ಲಿಗೆ ಕೋಲೇ
ತುಂಬೇಹೂವೀನಾ ಗುಡ್ಲಾಗಿ ತಿಂಗಳು ಮಾವಾ ಮೀಯನೆಂದರೇ ತಾವಿಲ್ಲಾ
ಕೋಲುಮಲ್ಲಿಗೆ ಕೋಲೇ ಕೋಲುಮಲ್ಲಿಗೆ ಕೋಲೇ
ಮೀಯನೆಂದರೇ ತಾವಿಲ್ಲಾ ತಿಂಗಳು ಮಾವಾ ಹೋಗಯ್ಯ ಮುಗಿಲಾ ತೆರೆವೀಗೇ
ಕೋಲುಮಲ್ಲಿಗೆ ಕೋಲೇ ಕೋಲುಮಲ್ಲಿಗೆ ಕೋಲೇ

Tuesday, February 5, 2013

ಬೆಳ್ದಿಂಗಳು ಹಾಲ್ ಚೆಲ್ಲಿದ ಹುಣ್ಣಿಮೆ

Theme - ಬೆಳುದಿಂಗಳು/Beludingalu
Lyrics - Kuvempu
Music - H R Leelavathi
Singers - H R Leelavathi & S G Raghuram
Link - http://www.kannadaaudio.com/Songs/Bhaavageethe/Premakashmira/Beldingalu.ram

ಬೆಳ್ದಿಂಗಳು ಹಾಲ್ ಚೆಲ್ಲಿದ ಹುಣ್ಣಿಮೆ ಇರುಳಲ್ಲಿ
ಬನದಂಚಿನ ಹೊಳೆ ತುಂಗೆಯ ಸಕ್ಕರೆ ಮರಳಲ್ಲಿ

ಓರೊರ್ವರೆ ನಾವೀರ್ವರು ಸಿಂಗಾರದಿ ಕೂಡಿ
ನಲಿದಾಡುವ ಬಾ ನಲ್ಲಳೆ ರಸದೋಕುಳಿಯಾಡಿ

ಮೇಗಡೆ ಬಾನ್ ಕೆಳಗಡೆ ಕಾನ್ ಜೊನ್ನದ ಜೇನ್ ನಡುವೆ
ನಿನ್ನೊಳು ನಾನ್ ನನ್ನೊಳು ನೀನ್ ನಮಗಿನ್ನೇನ್ ಗೊಡವೆ
ಹೊನ್ನೊಲುಮೆಯ ಹೊಂಬೊನಲಲಿ ತೇಲುವ ಬಾಳ್~ನಾವೆ
ಆಲಿಂಗನದಾವರ್ತದಿ ಮುಳುಗಿದರೇನ್ ಸಾವೆ

Monday, February 4, 2013

ಒಲಿದಿಹೆ ನಾ ಬೆಳುದಿಂಗಳಿಗೆ

Theme - ಬೆಳುದಿಂಗಳು/Beludingalu
Lyrics - Dr. Pu Ti Narasimhachar
Music - C Ashwath
Singers - M D Pallavi & Divya Raghavan
Link - http://www.kannadaaudio.com/Songs/Bhaavageethe/HonalaHaadu/Olidihe.ram

ಒಲಿದಿಹೆ ನಾ ಬೆಳುದಿಂಗಳಿಗೆ
ಮಂಗಳವಾಯ್ತಾಹಾ ಕಂಗಳಿಗೆ

ಚಂದಕ್ಕಿ ಮಾಮನ ತನಿ ಬೆಳಕೆ
ಬಾ ಬೆಳುದಿಂಗಳೆ ಅಂಗಳಕೆ
ನೀ ಬೆಳಗುವುದೆ ಬಲು ಚಂದ
ನೀನಿಹುದೆ ನಮಗಾನಂದ

ಪಿಸುಮಾತೊಳು ತಿರಿಯೆನೊಲಿವೆ
ಅಮ್ಮಯ್ಯ ನೀ ಬಲು ಚೆಲುವೆ
ಹೇಳುವರೇನೆಂಬರು ಸದ್ದು
ನಿನ್ನೀ ಮಾತಿದು ಬಲು ಮುದ್ದು

ಬೆಳುದಿಂಗಳೆ ನೀ ಕಲೆಗಾರ
ನೀ ತರುವೆ ಭ್ರಮೆ ಸುಕುಮಾರ
ಬೆಣ್ಣೆಗಿಂತ ಮೆದು ಮಿದಿಲ ಮಲೆ
ರಾಗ ರೂಪದಂತಾಯಿತೆಳೆ

ಬೆಳುದಿಂಗಳೆ ದೇವರ ವರವೆ
ನೀ ತರುವೆ ಸೊಗಕೆ ನುಲಿವೆ
ನೀ ಮತ್ತೆಲ್ಲರ ಬೇಸರಕೆ
ಹೊನ್ನಣ್ಣ ಈ ಮುಡಿ ಹರಕೆ

Friday, February 1, 2013

ಐದು ಬೆರಳು ಕೂಡಿ ಒಂದು ಮುಷ್ಟಿಯು

Republic Day Songs
Lyrics - H S Venkatesha Murthy
Music - B V Srinivas
Singers - Chorus
Link - http://www.kannadaaudio.com/Songs/Patriotic/BharataBhoomiNannaThayi/Aidu.ram

ಐದು ಬೆರಳು ಕೂಡಿ ಒಂದು ಮುಷ್ಟಿಯು
ಹಲವು ಮಂದಿ ಸೇರಿ ಈ ಸಮಷ್ಟಿಯು
ಬೇರೆ ಬೇರೆ ಒಕ್ಕಲು ಒಂದೆ ತಾಯ ಮಕ್ಕಳು
ಕೂಡಿ ಹಾಡಿದಾಗ ಗೆಲುವು ಗೀತೆಗೆ
ಭರತ ಮಾತೆಗೆ ಭರತ ಮಾತೆಗೆ
ಮೊಳಗಲಿ ಮೊಳಗಲಿ ನಾಡಗೀತವೂ
ಮೂಡಲಿ ಮೂಡಲಿ ಸುಪ್ರಭಾತವೂ

ಹಿಮಾಲಯದ ನೆತ್ತಿಯಲ್ಲಿ ಕಾಶ್ಮೀರದ ಬಿತ್ತಿಯಲ್ಲಿ
ಅಸ್ಸಾಮಿನ ಕಾಡಿನಲ್ಲಿ ಐದು ನದಿಯ ನಾಡಿನಲ್ಲಿ
ಹೊತ್ತಿಯುರಿವ ಬೆಂಕಿಯಾರಿ ತಣ್ಣಗಾಗಲಿ
ಬಂಜರಲ್ಲೂ ಹಚ್ಚ ಹಸಿರು ಬೆಳೆದು ತೂಗಲಿ
ಗಂಗೆ ತಂಗಿ ಕಾವೇರಿಯ ತಬ್ಬಿಕೊಳ್ಳಲಿ

ಲಡಾಕ್ ಖನೆಫಾ ಗಡಿಗಳಲ್ಲಿ ಯಂತ್ರಾಲಯ ಗುಡಿಗಳಲ್ಲಿ
ಭತ್ತ ಗೋಧಿ ಬೆಳೆಯುವಲ್ಲಿ ಪ್ರೀತಿಯು ಮೈ ತಳೆಯುವಲ್ಲಿ
ದುಡಿವ ಹಿಂದು ಮುಸಲ್ಮಾನರೊಂದುಗೂಡಲಿ
ಆರದಿರಲಿ ಪ್ರೀತಿ ದೀಪ ಕಣ್ಣ ಗೂಡಲಿ
ಎದೆಯ ಕೊಳೆಗಳನ್ನು ಅಶೃ ಧಾರೆ ತೊಳೆಯಲಿ

Wednesday, January 30, 2013

ವೇಷ ಬೇರೆ ಭಾಷೆ ಬೇರೆ ದೇಶ ಒಂದೇ ಭಾರತ

Republic Day Songs
Lyrics - Dr. Sa Shi Marulayya
Music - B V Srinivas
Singer - Rajesh Krishnan
Link - http://www.kannadaaudio.com/Songs/Patriotic/BharataBhoomiNannaThayi/Vesha.ram

ವೇಷ ಬೇರೆ ಭಾಷೆ ಬೇರೆ ದೇಶ ಒಂದೇ ಭಾರತ
ಒಂದೇ ತಾಯ ಮಕ್ಕಳೆಂದು ಘೋಶಿಸೋಣ ಸಂತತ

ತೀರ್ಥ ನಗೆಯ ಕ್ಷೇತ್ರವಿದೋ ಭವ್ಯ ನಾಡು ಭಾರತ
ಋಷಿಗಳುಸಿರ ಹರಕೆ ಹೊತ್ತ ದಿವ್ಯ ನಾಡು ಭಾರತ
ಕಡಲುಗಳನೆ ಉಡುಗೆಯುಟ್ಟು
ಘಟ್ಟದೊಳು ಬಳೆಯ ತೊಟ್ಟು
ನದಿ ನದಗಳ ಹಾರವಿಟ್ಟು
ಸೇತುವಿಂದ ಸಿಂಧುವರೆಗೂ ಬೆಳೆದು ನಿಂತ ಭಾರತ
ಭಂಗಗೊಳದ ವಂಗ ನಾಡ ಕೂಡಿ ಮೆರೆದ ಭಾರತ
ಇದೇ ನಮ್ಮ ಭಾರತ ಪುಣ್ಯ ಭೂಮಿ ಭಾರತ

ಭರತ ಖಂಡದಿಂದಲೇನೆ ನಿನಗೆ ಮೋಕ್ಷ ಪ್ರಾಪ್ತಿ
ತಪ್ಪಿ ನುಡಿದೆ ಎಂದರಹುದು ನಿನಗೆ ತಕ್ಕ ಶಾಸ್ತಿ
ಯಾವ ದೇಶದಲ್ಲೇ ದುಡಿ ಯಾವ ಮಣ್ಣಿನಲ್ಲೇ ಮಡಿ
ನಿಂತ ನೆಲವು ಹಿಡಿದ ಹುಡಿ ಭರತ ಭೂಮಿ ಎಂದು ತಿಳಿ

ಮಣ್ಣ ಮೋಹ ಬಿಟ್ಟರಿಲ್ಲೋ ನಿನಗೆ ಬೇರೆ ಸದ್ಗತಿ
ಬರಿಯ ಮಾತಿನಲ್ಲೇ ಮುಗಿವುದಲ್ಲೋ ನಿನ್ನ ಸಂಸ್ಕೃತಿ
ಮಾನವತೆಯ ಶುಚಿ ಮತಿ ಸನಾತನದ ಸತ್ಕೃತಿ

Tuesday, January 29, 2013

ನದನದಿಗಳ ಗಿರಿವನಗಳ ತಾಯೆ ಭರತಮಾತೆ

Republic Day Songs
Lyrics - K S Narasimha Swamy
Music - Mysore Ananthaswamy
Singers - B K Sumitra, Soumya, Udupa, Srinivasa


ನದನದಿಗಳ ಗಿರಿವನಗಳ ತಾಯೆ ಭರತಮಾತೆ
ಓಂಕಾರದ ಝಂಕಾರದ ನಿನಗಿದೋ ಶುಭಗೀತೆ

ಹಿಮಚು೦ಬಿತ ಶಿಖರದಲ್ಲಿ ತಾಯೆ ನಿನ್ನ ನೆಲಸು
ಬಿರುಗಾಳಿಯ ಭಿತ್ತಿಯಿಂದ ನೀ ಎಮ್ಮನು ಹರಸು

ಗಂಗೆಯಮುನೆ ಸಂಗಮದಲಿ ನಿನ್ನ ವೇದಘೋಷ
ದೇವದಾರು ವನಗಳಲ್ಲಿ ನಿನ್ನ ಮಂದಹಾಸ

ವಿಂಧ್ಯಾಚಲ ಗೀತೆಯಲ್ಲಿ ಸಂಧ್ಯಾರುಣ ಛಾಯೆ
ಕಾವೇರಿಯ ತೆರೆಗಳಲ್ಲಿ ಮೀನಾಕ್ಷಿಯ ಮಾಯೆ

ಪರ್ವತಗಳ ಶಿಖರದಿಂದ ಕಡಲಂಚಿನ ತನಕ
ತಾಯೆ ನಿನ್ನ ಮಕುಟದಿಂದ ಹೊಳೆಯಲಿ ಮಣಿಕನಕ

Monday, January 28, 2013

ನಮ್ಮ ತಾಯಿ ಭಾರತಿ

Republic Day Songs
Lyrics - R N Jayagopal
Music - VijayaBhaskar
Singers -  P B Srinivas
Link - http://www.kannadaaudio.com/Songs/Patriotic/Namma.ram

ನಮ್ಮ ತಾಯಿ ಭಾರತಿ ನಮ್ಮ ನಾಡು ಭಾರತ
ನಮ್ಮ ರೀತಿ ನಮ್ಮ ನೀತಿ ನಮ್ಮ ಉಸಿರು ಭಾರತ

ಹಕ್ಕಿಯಂತೆ ಹಾರಿ ನಾವು ನಾಡ ನೋಡುವ
ಹತ್ತು ದೇಶದಲ್ಲಿ ತಾಯ ಕೀರ್ತಿ ಹಾಡುವ
ಶಾಂತಿ ಸ್ನೇಹ ಪ್ರೇಮದ ಸಂದೇಶವ ಸಾರುವ

ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು
ಏಳು ಸ್ವರವು ಸೇರಿ ಸಂಗೀತವಾಯಿತು
ವಿವಿಧ ನುಡಿಯು ವಿವಿಧ ನಡೆಯು ಕಲೆತ ವಿವಿಧ ಭಾರತಿ

ನಮ್ಮ ನಾಡು ನಡೆದು ಬಂದ ಹಾದಿ ನೆನೆಯುವ
ಆದ ತಪ್ಪನೆಲ್ಲ ಅರಿತು ಪಾಠ ಕಲಿಯುವ
ಕರ್ಮವೀರರಾಗಿ ಪ್ರಗತಿಪಥದಿ ಮುಂದೆ ಸಾಗುವ

ನಮ್ಮ ತಾಯ ಸೇವೆಗಾಗಿ ನಾವು ದುಡಿಯುವ
ನಮ್ಮ ನಾಡ ರಕ್ಷಣೆಗೆ ನಿಂತು ಮಡಿಯುವ
ಜಾತಿಮತದ ಭೇದಗಳನು ತೊರೆದು ಒಂದುಗೂಡುವ
 

Friday, January 25, 2013

ತರವಲ್ಲ ತಗಿ ನಿನ್ನ

Shishunala Sharif Songs
Music - C Ashwath
Singer - C Ashwath
Link - http://www.kannadaaudio.com/Songs/Bhaavageethe/SantaShishunalaSharifa/Tara.ram

ತರವಲ್ಲ ತಗಿ ನಿನ್ನ ತಂಬೂರಿ ಸ್ವರ
ಬರದೆ ಬಾರಿಸದಿರು ತಂಬೂರಿ
ಸರಸ ಸಂಗೀತದ ಕುರುಹುಗಳರಿಯದೆ
ಬರದೆ ಬಾರಿಸದಿರು ತಂಬೂರಿ

ಮದ್ದಲಿ ದನಿಯೊಳು ತಂಬೂರಿ ಅದ
ತಿದ್ದಿ ನುಡಿಸಬೇಕೊ ತಂಬೂರಿ
ಸಿದ್ದ ಸಾಧಕರ ವಿದ್ಯೆಗೆ ಒದಗುವ
ಬುದ್ದಿವಂತಗೆ ತಕ್ಕ ತಂಬೂರಿ

ಬಾಳಬಲ್ಲವರಿಗೆ ತಂಬೂರಿ ದೇವ
ಭಾಳಾಕ್ಷ ರಚಿಸಿದ ತಂಬೂರಿ
ಹೇಳಲಿ ಏನಿದರ ಹಂಚಿಕೆ ತಿಳಿಯದ
ತಾಳಗೇಡಿಗೆ ಸಲ್ಲ ತಂಬೂರಿ

ಸತ್ಯ ಶರಧಿಯೊಳು ತಂಬೂರಿ ನಿತ್ಯ
ಉತ್ತಮರಾಡುವ ತಂಬೂರಿ
ಬತ್ತೀಸರಾಗದ ಬಗೆಯನರಿಯದಂಥ
ಕತ್ತಿಗಿನ್ಯಾತಕೆ ತಂಬೂರಿ

ಹಸನಾದ ಮ್ಯಾಳಕೆ ತಂಬೂರಿ ಇದು
ಕುಶಲರಿಗೊಪ್ಪುವ ತಂಬೂರಿ
ಶಿಶುನಾಳಧೀಶನ ಓದುಪುರಾಣದಿ
ಹಸನಾಗಿ ಬಾರಿಸೊ ತಂಬೂರಿ

Thursday, January 24, 2013

ಅಳಬೇಡ ತಂಗಿ ಅಳಬೇಡ

Shishunala Sharif Songs
Music - C Ashwath
Singer - Shimoga Subbanna
Link - http://www.kannadaaudio.com/Songs/Bhaavageethe/SantaShishunalaSharifa/Ala.ram

ಅಳಬೇಡ ತಂಗಿ ಅಳಬೇಡ
ನಿನ್ನ ಕಳುಹಬಂದವರಿಲ್ಲಿ ಉಳುಹಿಕೊಂಬುವರಿಲ್ಲ

ದಡಿಕೀಲೆ ಉಡಿಯಕ್ಕಿ ಹಾಕಿದರವ್ವ
ಒಳ್ಳೆ ದುಡುಕೀಲೇ ಮುಂದಕ್ಕೆ ನೂಕಿದರವ್ವ
ಮಿಡಿಕ್ಯಾಡಿ ಮದಿವ್ಯಾದೆ ಮೋಜು ಕಾಣವ್ವ
ಹುಡುಕ್ಯಾಡಿ ಮಾಯದ ಮರವೇರಿದ್ಯವ್ವ

ರಂಗೀಲೀ ಉಟ್ಟೀದಿ ರೇಶ್ಮೀ ದಡಿ ಸೀರಿ
ಮತ್ತ ಹಂಗ ನೂಲಿನ ಪರಿವಿ ಮರಿತ್ಯವ್ವ ನಾರಿ
ಮಂಗಳ ಮೂರುತಿ ಶಿಶುನಾಳಧೀಶನ
ಅಂಗಳಕ ನೀ ಹೊರತು ಆದ್ಯವ್ವ ಗೌರಿ

Wednesday, January 23, 2013

ಸೋರುತಿಹುದು ಮನೆಯ ಮಾಳಿಗಿ

Shishunala Sharif Songs
Music - C Ashwath
Singer - Shimoga Subbanna

ಸೋರುತಿಹುದು ಮನೆಯ ಮಾಳಿಗಿ
ಅಜ್ಞಾನದಿಂದಾ
ಸೋರುತಿಹುದು ಮನೆಯ ಮಾಳಿಗಿ

ಸೋರುತಿಹುದು ಮನೆಯ ಮಾಳಿಗಿ
ದಾರು ಗಟ್ಟಿ ಮಾಳ್ಪರಿಲ್ಲ
ಕಾಳ ಕತ್ತಲೆಯೊಳಗೆ ನಾನು
ಮೇಲಕೇರಿ ಮೆಟ್ಟಲಾರೆ

ಮುರುಕು ತೊಲೆಯು ಹುಳುಕು ಜಂತಿ
ಕೊರೆದು ಸರಿದು ಕೀಲ ಸಡಲಿ
ಹರಕು ಚಪ್ಪರ ಜೇರುಗಿಂಡಿ
ಮೇಲಕೇರಿ ಮೆಟ್ಟಲಾರೆ

ಕರಕಿ ಹುಲ್ಲು ಕಸವು ಹತ್ತಿ
ಹರಿದು ಸಾಲು ಇರಬಿ ಮುತ್ತಿ
ಜಲದ ಭರದಿ ಸರಿಯೆ ಮಣ್ಣು
ಒಳಗೆ ಹೊರಗೆ ಏಕವಾಗಿ

ಕಾಂತೆ ಕೇಳೆ ಕರುಣದಿಂದ
ಬಂತು ಕಾಣೆ ಹುಬ್ಬು ಮಳೆಯು
ಎಂತೊ ಶಿಶುನಾಳಧೀಶ ತಾನು
ನಿಂತು ಪೊರೆವನು ಎಂದು ನಂಬಿದೆ

Tuesday, January 22, 2013

ಬಿದ್ದೀಯಬ್ಬೇ ಮುದುಕಿ

Shishunala Sharif Songs
Music - C Ashwath
Singer - Shimoga Subbanna
Link - http://www.kannadaaudio.com/Songs/Folk/Biddiyabbe/Biddiyabbe.ram


ಬಿದ್ದೀಯಬ್ಬೇ ಮುದುಕಿ
ಬಿದ್ದೀಯಬ್ಬೇ.
ನೀ ದಿನ ಹೋದಾಕಿ
ಇರು ಭಾಳ ಜೋಕಿ
ಬಿದ್ದೀಯಬೇ ಮುದುಕಿ ಬಿದ್ದೀಯಬೇ

ಸದ್ಯಕಿದು ಹುಲುಗೂರ ಸಂತಿ
ಗದ್ದಲದೊಳಗ್ಯಾಕ ನಿಂತಿ
ಬಿದ್ದು ಇಲ್ಲಿ ಒದ್ದಾಡಿದರ
ಎದ್ದು ಹ್ಯಾಂಗ ಹಿಂದಕ ಬರತಿ
ಬುದ್ದಿಗೇಡಿ ಮುದುಕಿ ನೀನು ಬಿದ್ದೀಯಬೇ

ಬುಟ್ಟಿಯಲ್ಲಿ ಪತ್ತಲ ಇಟ್ಟಿ
ಅದನು ಉಟ್ಟ ಹೊತ್ತಳು ಜೋಕಿ
ಕೆಟ್ಟಗಂಟಿ ಚೌಡೇರು ಬಂದು
ಉಟ್ಟುದನ್ನೆ ಕದ್ದಾರ ಜೋಕಿ
ಬುದ್ಧಿಗೇಡಿ ಮುದುಕಿ ನೀನು ಬಿದ್ದೀಯಬೇ

ಶಿಶುನಾಳಾಧೀಶನ ಮುಂದೆ
ಕೊಸರಿ ಕೊಸರಿ ಹೋಗಬ್ಯಾಡ
ಹಸನವಿಲ್ಲ ಹರಯ ಸಂದ
ಪಿಸುರು ಪಿಚ್ಚುಗಣ್ಣಿನ ಮುದುಕಿ
ಬುದ್ದಿಗೇಡಿ ಮುದುಕಿ ನೀನು ಬಿದ್ದೀಯಬೇ

Friday, January 18, 2013

ನಿಂಬೀಯ ಬನಾದ ಮ್ಯಾಗಳ

Folk songs
Singer - Anuradha Sriram
Link - http://www.kannadaaudio.com/Songs/Folk/ElloJogappaNinnaAramane/Nimbiya.ram


ನಿಂಬೀಯ ಬನಾದ ಮ್ಯಾಗಳ ಚಂದ್ರಮಾ ಚಂಡಾಡಿದ
ನಿಂಬೀಯ ಬನಾದ ಮ್ಯಾಗಳ ಚಂದ್ರಮಾ ಚಂಡಾಡಿದ
ನಿಂಬೀಯ

ಎದ್ದೋನೇ ನಿಮ ಧ್ಯಾನ ಕೇಳುತಲಿ ನಿಮಗ್ಯಾನ
ಸಿದ್ಧಾರ ಧ್ಯಾನ ಸೀವು ಧ್ಯಾನ ನಿಂಬೀಯ
ಸಿದ್ಧಾರ ನೇ ಗ್ಯಾನ ಸೀವು ಗ್ಯಾನ ಮಾಸಿವಗೆ
ನಿದ್ರೆಕಣ್ಣಾಗೆ ನಿಮ ಗ್ಯಾನ ನಿಂಬೀಯ
ನಿಂಬೀಯ ಬನಾದ ಮ್ಯಾಗಳ ಚಂದ್ರಮಾ ಚಂಡಾಡಿದ
ನಿಂಬೀಯ

ಆರೇಲೇ ಮಾವಿನ ಬೇರಾಗಿ ಇರುವೋಳೆ
ವಾಲ್ಗಾದ ಸದ್ದಿಗೆ ಒದಾಗೋಳೆ ನಿಂಬೀಯ
ವಾಲ್ಗಾದ ಸದ್ದಿಗೆ ಒದಾಗೋಳೆ ಸರಸತಿಯೇ
ನಮ್ ನಾಲಿಗೆ ತೊಡರ ಬಿಡಿಸವ್ವಾ
ನಿಂಬೀಯ ಬನಾದ ಮ್ಯಾಗಳ ಚಂದ್ರಮಾ ಚಂಡಾಡಿದ
ನಿಂಬೀಯ

ಎಂಟೀಲೀ ಮಾವಿನ ದಂಟಾಗಿ ಇರುವೋಳೆ
ಗಂಟೆ ಸದ್ದಿಗೆ ಒದಾಗೋಳೆ ನಿಂಬೀಯ
ಗಂಟೆಯ ಸದ್ದಿಗೆ ಒದಾಗೋಳೆ ಸರಸತಿಯೇ
ನಮ್ ಗಂಟಾಲ ತೊಡರ ಬಿಡಿಸವ್ವಾ
ನಿಂಬೀಯ ಬನಾದ ಮ್ಯಾಗಳ ಚಂದ್ರಮಾ ಚಂಡಾಡಿದ
ನಿಂಬೀಯ

ರಾಗಿ ಬೀಸೊ ಕಲ್ಲೇ ರಾಜಾನ ಹೊಡಿಗಲ್ಲೆ
ರಾಯಾ ಅಣ್ಣಾಯ್ಯನ ಅರಮನೆ ನಿಂಬೀಯ
ರಾಯಾ ಅಣ್ಣಾಯ್ಯನ ಅರಮನೆಯಾಗಿಕಲ್ಲೇ
ನೀ ರಾಜಾ ಬೀದಿಗೆ ದನಿದೊರೆ
ನಿಂಬೀಯ ಬನಾದ ಮ್ಯಾಗಳ ಚಂದ್ರಮಾ ಚಂಡಾಡಿದ
ನಿಂಬೀಯ

ಕಲ್ಲವ್ವ ಮಾತಾಯಿ ಮೆಲ್ಲವ್ವ ರಾಗಿಯ
ಜಲ್ಲಜಲ್ಲನೇ ಉದೂರವ್ವ ನಿಂಬೀಯ
ಜಲ್ಲಜಲ್ಲನೇ ಉದೂರವ್ವ ನಾ ನಿನಗೆ
ಬೆಲ್ಲದಾರತಿಯ ಬೆಳಗೆನೆ
ನಿಂಬೀಯ ಬನಾದ ಮ್ಯಾಗಳ ಚಂದ್ರಮಾ ಚಂಡಾಡಿದ
ನಿಂಬೀಯ ಬನಾದ ಮ್ಯಾಗಳ ಚಂದ್ರಮಾ ಚಂಡಾಡಿದ
ನಿಂಬೀಯ

Thursday, January 17, 2013

ಮುಂಜಾನೆದ್ದು ಕುಂಬಾರಣ್ಣ

Folk Songs

ಮುಂಜಾನೆದ್ದು ಕುಂಬಾರಣ್ಣ ಹಾಲುಬಾನುಂಡಾನ ಹಾರ‍್ಹಾರಿ ಮಣ್ಣಾ ತುಳಿದಾನ
ಹಾರಿ ಹಾರ‍್ಯಾಡಿ ಮಣ್ಣಾ ತುಳಿಯುತ್ತ ಮಾಡ್ಯಾನ ನಾರ‍್ಯಾರು ಹೊರುವಂತ ಐರಾಣಿ

ಹೊತ್ತಾರೆದ್ದು ಕುಂಬಾರಣ್ಣ ತುಪ್ಪಾಬಾನುಂಡಾನ ಘಟ್ಟಿಸಿ ಮಣ್ಣಾ ತುಳಿದಾನ
ಘಟ್ಟೀಸಿ ಮಣ್ಣಾ ತುಳಿಯುತ್ತ ಮಾಡ್ಯಾನ ಮಿತ್ರೇರು ಹೊರುವಂತ ಐರಾಣಿ

ಅಕ್ಕಿ ಹಿಟ್ಟು ನಾವು ತುಂಬ್ಕೊಂಡು ತಂದೀವಿ ಗಿಂಡೀಲಿ ತಂದೀವಿ ತಿಳಿದುಪ್ಪಾ
ಗಿಂಡೀಲಿ ತಂದೀವಿ ತಿಳಿದುಪ್ಪಾ ಕುಂಬಾರಣ್ಣ ತುಂಬೀತು ನಮ್ಮ ಐರಾಣಿ

ಕುಂಬಾರಣ್ಣನ ಮಡದಿ ಕಡದಾಗ ಕೈಯಿಟ್ಟು ಕೊಡದಾ ಮ್ಯಾಲೇನ ಬರದಾಳ
ಕೊಡದಾ ಮ್ಯಾಲೇನ ಬರದಾಳ್ ಕಲ್ಯಾಣದ ಶರಣ ಬಸವನ ನೆನೆಸ್ಯಾಳ

Wednesday, January 16, 2013

ಮೂಡಲ್ ಕುಣಿಗಲ್ ಕೆರೆ

Folk Songs
Singers : Vemagal D. Narayana Swamy
Music : B.V.Srinivas
Lyrics : Somashekar Aradhya
Playback Singers : Geethanjali, Jayanthi, Indara, K.S.Surekha, Premalatha

ಮೂಡಲ್ ಕುಣಿಗಲ್ ಕೆರೆ ನೋಡೋರ್ಗೋಂದೈಭೋಗ
ಮೂಡಿ ಬರ್ತಾನೆ ಚಂದಿರಾಮ| ತಾನಂದಾನೋ
ಮೂಡಿ ಬರ್ತಾನೆ ಚಂದಿರಾಮ|
ಅತಂತ್ರಿಸಿ ನೋಡೋರ್ಗೆ ಎಂಥಾ ಕುಣಿಗಲ್ ಕೆರೆ
ಸಂತೆ ಹಾದಿಲಿ ಕಲ್ಲುಕಟ್ಟೆ ತಾನಂದಾನೋ
ಸಂತೆ ಹಾದಿಲಿ ಕಲ್ಲುಕಟ್ಟೆ||

ಬಾಳೆಯ ಹಣ್ಣಿನಂತೆ ಬಾಗಿದ ಕುಣಿಗಲ್ ಕೆರೆ
ಭಾವ ತಂದಾನು ಬಣ್ಣದ ಸೀರೆ| ತಾನಂದಾನೋ
ಭಾವ ತಂದಾನು ಬಣ್ಣದ ಸೀರೆ||
ನಿಂಬೆಯ ಹಣ್ಣಿನಂತೆ ತುಂಬಿದ್ ಕುಣಿಗಲ್ ಕೆರೆ
ಆಂದಾ ನೋಡಾಲು ಶಿವ ಬಂದ್ರು | ತಾನಂದನೋ
ಅಂದಾ ನೋಡಾಲು ಶಿವ ಬಂದ್ರು ||

ಅಂದಾನೆ ನೋಡಲು ಶಿವ ಬಂದ್ರು ಶಿವಯೋಗಿ
ಕಬ್ಬಕ್ಕಿ ಬಾಯ ಬಿಡುತಾವೆ | ತಾನಂದನೋ
ಕಬ್ಬಕ್ಕಿ ಬಾಯಿ ಬಿಡುತಾವೆ ||
ಕಬ್ಬಕ್ಕಿ ಬಾಯಿ ಬಿಡುತಾವೆ ಬಿಡದಿ
ಗಬ್ಬಾದ್ ಹೊಂಬಾಳೆ ನಡುಗ್ಯಾವೆ|ತಾನಂದಾನೋ
ಗಬ್ಬಾದ್ ಹೊಂಬಾಳೆ ನಡುಗ್ಯಾವೆ||

ಹಾಕಕ್ಕೊಂದ್ ಆರೆಗೋಲು ನೂಕಾಕ್ಕೊಂದೂರುಗೋಲು
ಬೊಬ್ಬೆ ಹೊಡೆದಾವೆ ಬಾಳೆಮೀನು | ತಾನಂದನೋ
ಬೊಬ್ಬೆ ಹೊಡೆದಾವೆ ಬಾಳೆಮೀನು ||
ಬೊಬ್ಬೆಯ ಹೊಡೆದಾವೆ ಬಾಳೆಮೀನು ಕೆರೆಯಾಗೆ
ಗುಬ್ಬಿ ಸಾರಂಗ ನಗುತಾವೆ ತಾನಂದನೋ
ಗುಬ್ಬಿ ಸಾರಂಗ ನಗುತಾವೆ||

Tuesday, January 15, 2013

ಕುದುರೇನ ತಂದೀನಿ

Folk Songs - By popular demand
Song - ಕುದುರೇನ ತಂದೀನಿ

ಕುದುರೇನ ತಂದೀನಿ ಜೀನಾವ ಬಿಗಿದೀನಿ
ಬರಬೇಕು ತಂಗಿ ಮದುವೇಗೆ

ಅಂಗ್ಳ ಗುಡಿಸೋರಿಲ್ಲ ಗಂಗ್ಳ ತೊಳೆಯೋರಿಲ್ಲ
ಹೆಂಗೆ ಬರಲಣ್ಣ ಮದುವೇಗೆ?
ಅಂಗ್ಳಾಕೆ ಆಳಿಡುವೆ ಗಂಗ್ಳಾಕೆ ತೊತ್ತಿಡುವೆ
ಬರಬೇಕು ತಂಗಿ ಮದುವೇಗೆ

ಮಳೆಯಾರ ಬಂದೀತ ಹೊಳೆಯಾರ ತುಂಬೀತ
ಹೆಂಗೆ ಬರಲಣ್ಣ ಮದುವೇಗೆ?
ಚಿನ್ನಾದ ಹರಿಗೋಲ್ಗೆ ರನ್ನಾದ ಹುಟ್ಟಾಕಿ
ಜೋಕೆಲಿ ನಿನ್ನ ಕರೆದೊಯ್ವೆ

ಅಪ್ಪಯಿದ್ದರೆ ಎನ್ನ ಸುಮ್ಮಾನೆ ಕಳುಹೋರೆ
ಅಮ್ಮಾ ಇಲ್ಲಾದ ಮನೆಯಲ್ಲಿ
ಬಂದಾರೆ ಬಂದೇನು ಅಂಗ್ಳದಾಗೆ ನಿಂದೇನು
ಕಣ್ದಾಗೆ ಧಾರೆ ಎರೆದೇನು

Monday, January 14, 2013

ಸುಗ್ಗಿ ವ್ಯಾಳೆಗೆ

Song - Suggi Vyalege
Lyrics - DoddarangeGowda
Music - C Ashwath
Singer - S P Balasubramanyam

Link - http://www.kannadaaudio.com/Songs/Bhaavageethe/MavuBevu/Suggi.ram

ಸುಗ್ಗಿ ವ್ಯಾಳೆಗೆ
ಸೊಬಗೇ ಸುತ್ತ ಕಂಡು ಭೂಮಿ ಬೀಗೈತೆ
ಬವಣೆ ನೀಗೈತೆ

ರಾಗಿ ಹೊಲಗಳು ತೂಗುವ ಹೊನಪಿಗೆ ಬೆಡಗೇ ಮಿಂಚೈತೆ
ಹುಚ್ಚೆಳ್ಳು ಸಾಸಿವೆ ಅವರೆ ಸೊಗಡು ಕಂಪು ಹರಡೈತೆ
ಕಡಲೆ ಕಬ್ಪು ಹೋಬಾಗಿ ಬೆಳೆದು ರಾಶಿ ಬಿದ್ದೈತೆ
ಜೋಳ ನವಣೆ ಹುರುಳಿ ತೊಗರಿ ಕಣ್ಣು ಚುಚ್ಚೈತೆ

ವರುಷ ಪೂರ ದುಡಿದ ಜನಕೆ ಫಸಲು ದಕ್ಕೈತೆ
ಕೇಕೆ ಹಾಕೋ ರೈತರಂಗಿಗೆ ರಾಗ ಉಕ್ಕೈತೆ
ಹಸಿರು ಬಯಸೋ ರಾಸುಗಳಿಗೆ ಮೇವು ಸಿಕ್ಕೈತೆ
ಕಾಳು ಕಡ್ಡಿ ಹುಡುಕೋ ಹಕ್ಕಿಗೆ ಹಸಿವು ತಣಿದೈತೆ

Friday, January 11, 2013

ಮಾತಿಲ್ಲದ ಗಳಿಗೆ ....ಮೌನ

Album - Ninna Nenapu
Singers - Nitin Raghuveer, Supriya Aacharya
Link - http://www.kannadaaudio.com/Songs/Pop/NinnaNenapu/Mouna.ram

ಮಾತಿಲ್ಲದ ಗಳಿಗೆ
ಎಳೆ ಬಿಸಿಲ ಕಿರಣಗಳಲ್ಲಿ ಧೂಳಿನಾಟದ ಮೌನ
ಮನದಿ ನೂರು ದನಿಗಳ ಕಲಹ

ಹಿಮ ಕವಿದ ಹೃದಯವ ತಡವಿ ಕ್ಷಣದಿ ಬಯಲಾದ ಮಾಯೆ
ಕರಗಿ ನಿಂತ ನೀರಿನ ಮೇಲೆ ಅಲೆವ ಚಂದ್ರನ ಮೌನ

ಅದರುವ ತುಟಿ ಮೀರದಂತೆ ಎದೆಯಲಿ ಅದುಮಿತ್ತ ಭಾವ
ಮಡುಗಟ್ಟಿದ ಆಗಸದಲ್ಲಿ ಹನಿಯೊಡೆಯದ ಮೌನ

ಇರುಳು ಕಂಡ ಬಣ್ಣದ ಕನಸು ಕಲಸಿಹೋಗುವ ನಸುಗು
ಹಣ್ಣೆಲೆಯ ಅಂಚಿನಲ್ಲಿ ಮಂಜು ಹನಿಗಳ ಮೌನ

ಬಿಸಿಯುಸಿರಲ್ಲಿ ಬೆಂದ ಒಡಲು ಕುದಿವ ಉಪ್ಪಿನ ಕಡಲು
ಕೆಂಪಡರಿದ ಕಂಗಳಲ್ಲಿ ಉಕ್ಕಿ ಹರಿಯದ ಮೌನ

Thursday, January 10, 2013

ನಗುವ ನಯನ ಮಧುರ ಮೌನ

Theme - ಮೌನ
Lyrics - R N Jayagopal
Music - Ilayaraja
Singers - S Janaki & S P Balasubramaniam
Link - http://www.youtube.com/watch?v=SIeqFuk-ZuU

ನಗುವ ನಯನ ಮಧುರ ಮೌನ
ಮಿಡಿವಾ ಹೃದಯಾ ಇರೆ ಮಾತೇಕೆ?
ಹೊಸ ಭಾಷೆಯಿದು.. ರಸ ಕಾವ್ಯವಿದು
ಇದ ಹಾಡಲು ಕವಿ ಬೇಕೇ?

ನಿಂಗಾಗಿ ಹೇಳುವೆ ಕತೆ ನೂರನು
ನಾನಿಂದು ನಗಿಸುವೆ ಈ ನಿನ್ನನು
ಇರುಳಲ್ಲು ಕಾಣುವೆ ಕಿರು ನಗೆಯನು
ಕಣ್ಣಲ್ಲಿ ಹುಚ್ಚೆದ್ದ ಹೊಂಗನಸನು
ಜೊತೆಯಾಗಿ ನಡೆವೆ ನಾ ಮಳೆಯಲೂ
ಬಿಡದಂತೆ ಹಿಡಿವೆ ಈ ಕೈಯ್ಯನು
ಗೆಳೆಯ ಜೊತೆಗೆ ಹಾರಿ ಬರುವೆ
ಬಾನಾ ಎಲ್ಲೆ ದಾಟಿ ನಲಿವೆ


ಈ ರಾತ್ರಿ ಹಾಡು ಪಿಸು ಮಾತಲಿ
ನಾ ತಂದೆ ಇನಿದಾದ ಸವಿ ರಾಗವ
ನೀನಲ್ಲಿ ನಾನಿಲ್ಲಿ ಏಕಾಂತವೆ
ನಾ ಕಂಡೆ ನನ್ನದೆ ಹೊಸ ಲೋಕವ
ಈ ಸ್ನೇಹ ತಂದಿದೆ ಎದೆಯಲ್ಲಿ
ಎಂದೆಂದೂ ಅಳಿಸದ ರಂಗೋಲಿ
ಆಸೆ ಹೂವ ಹಾಸಿ ಕಾದೆ
ನಡೆ ನೀ ಕನಸಾ ಹೊಸಕಿ ಬಿಡದೆ

Wednesday, January 9, 2013

ಬೇಸರಾಗಿದೆ ಮಾತು ಭಾರವಾಗಿದೆ ಮೌನ

Theme - ಮೌನ
Lyrics - K S Nissar Ahmed
Music - Prahlad Dixit
Link - http://www.youtube.com/watch?v=dorqQXYcBkE

ಬೇಸರಾಗಿದೆ ಮಾತು, ಭಾರವಾಗಿದೆ ಮೌನ
ನೋವು ಕರಗಿದೆ ಕಣ್ಣಲ್ಲಿ
ಅಡಿಗೆ ಚುಚ್ಚಿದ ಮುಳ್ಳು ಒಳಗದೆ ಮುರಿಯದಂತೆ
ಭಾವ ಕುಟುಕಿದೆ ಮನದಲಿ

ಮುರಿದ ಪ್ರೀತಿಯ ಮರೆಯೆ ಬಾಳಿನೊಳ ಹೊಕ್ಕಿರಲು
ಸಾವ ಭಯ ತಾನೆರಗಿತೊ
ಮಯೆಗೆ ಆಸೆರೆ ಪಡೆಯೆ ಹಾವ ಹೆಡೆಯಲಿ ನಿಂತ
ಹಕ್ಕಿಯಂದದಿ ಚೀರಿತೊ

ಸಿಪ್ಪೆ ತಿರುಳನು ಉಳಿದು ಮಣ್ಣಿಗುರುಳಿದ ಬೀಜ
ಕನಸುವಂತೆಯೆ ಮೊಳಕೆಗೆ
ಎಲ್ಲ ನಂಟನು ತೊರೆದು ನಗ್ನವಾಗಿದೆ ಜೀವ
ಹೊಸತು ಬದುಕಿನ ಬಳಕೆಗೆ

ಯಾವ ಕಾಡಿನ ಮರೆಯ ಮರದ ಕೊಂಬೆಯನರಸಿ
ಜೀವ ರೆಕ್ಕೆಯ ಬಿಚ್ಚಿತೊ
ಯಾವ ಗವಿಗತ್ತಲಿನ ಮೌನ ಭಾರವ ಕನಸಿ
ಇದ್ದ ಹಕ್ಕೆಯ ಬಿಟ್ಟಿತೊ

Tuesday, January 8, 2013

ಮೌನ ತಬ್ಬಿತು ನೆಲವ

Theme - ಮೌನ
Lyrics - Gopalakrishna Adiga
Music - C Ashwath
Link - http://www.kannadaaudio.com/Songs/Bhaavageethe/BhaavaLahari/Mouna.ram

ಮೌನ ತಬ್ಬಿತು ನೆಲವ ಜುಮ್ಮೆನೆ ಪುಳಕಗೊಂಡಿತು ಧಾರಿಣಿ
ನೋಡಿ ನಾಚಿತು ಬಾನು ಸೇರಿತು ಕೆಂಪು ಸಂಜೆಯ ಕದಪಲಿ

ಹಕ್ಕಿಗೊರಲಿನ ಸುರತಗಾನಕೆ ಬಿಗಿಯು ನಸುವೆ ಸಡಿಲಿತು
ಬೆಚ್ಚಬೆಚ್ಚನೆಯುಸಿರಿನಂದದಿ ಗಾಳಿ ಮೆಲ್ಲನೆ ತೆವಳಿತು

ಇರುಳ ಸೆರಗಿನ ನೆಳಲು ಚಾಚಿತು ಬಾನು ತೆರೆಯಿತು ಕಣ್ಣನು
ನೆಲವು ತಣಿಯಿತು ಬೆವರು ಹನಿಯಿತು ಬಾಷ್ಪ ನೆನೆಸಿತು ಹುಲ್ಲನು

ಮೌನ ಉರುಳಿತು ಹೊರಳಿತೆದ್ದಿತು ಗಾಳಿ ಭೋರೆನೆ ಬೀಸಿತು
ತೆಂಗುಗರಿಗಳ ಚಾಮರಕೆ ಹಾಯೆಂದು ಮೌನವು ಮಲಗಿತು

Monday, January 7, 2013

ಮೊದಲ ದಿನ ಮೌನ

Theme - ಮೌನ
Lyrics - K S Narasimha Swamy
Music - C Ashwath
Link - http://www.kannadaaudio.com/Songs/Bhaavageethe/Live-Concert-4-Pallavi-Arun/Modala.ram

ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ 
ಚಿಂತೆ ಬಿಡಿ ಹೂವ ಮುಡಿದಂತೆ 
ಹತ್ತುಕಡೆ ಕಣ್ಣು ಸಣ್ಣಗೆ ದೀಪ ಉರಿದಂತೆ 
ಜೀವದಲಿ ಜಾತ್ರೆ ಮುಗಿದಂತೆ

 
ಎರಡನೆಯ ಹಗಲು ಇಳಿಮುಖವಿಲ್ಲ ಇಷ್ಟು ನಗು 
ಮೂಗುತಿಯ ಮಿಂಚು ಒಳಹೊರಗೆ 
ನೀರೊಳಗೆ ವೀಣೆ ಮಿಡಿದಂತೆ ಆಡಿದ ಮಾತು 
ಬೇಲಿಯಲಿ ಹಾವು ಹರಿದಂತೆ

 
ಮೂರನೆಯ ಸಂಜೆ ಹೆರಳಿನ ತುಂಬಾ ದಂಡೆ ಹೂ 
ಹೂವಿಗೂ ಜೀವ ಬಂತಂತೆ 
ಸಂಜೆಯಲಿ ರಾತ್ರಿ ಇಳಿದಂತೆ ಬಿರು ಬಾನಿಗೂ
ಹುಣ್ಣಿಮೆಯ ಹಾಲು ಹರಿದಂತೆ

Wednesday, January 2, 2013

ಹೊಸ ವರ್ಷ ಬಂದಂತೆ

Lyrics - N S LakshmiNarayana Bhatta
Music - C Ashwath

Link - http://www.kannadaaudio.com/Songs/Bhaavageethe/GaanaSudhe-1-C.Ashwath/Hosa.ram

ಹೊಸ ವರ್ಷ ಬಂದಂತೆ ಯಾರು ಬಂದಾರು
ಗಿಡಮರಕೆ ಹೊಸವಸ್ತ್ರ ಯಾರು ತಂದಾರು
ಹಾಡೆಂದು ಕೋಗಿಲೆಯ ಕೂಗಿ ಕರೆದಾರು
ಮಾವಿನಾ ಚಿಗುರನ್ನು ತಿನಲು ಕೊಟ್ಟಾರು.

ಏನೋ ನಿರೀಕ್ಷೆ ಸೃಷ್ಟಿಯಲ್ಲೆಲ್ಲ
ಹೂಗಳ ಪರೀಕ್ಷೆ ದುಂಬಿಗಳಿಗೆಲ್ಲ
ಬಂದನೊ ವಸಂತ ಬಂದಿಗಳೆ ಎಲ್ಲ
ಹೊಸ ಬಯಕೆ, ಹೊಸ ಆಲೆ ರುಚಿರುಚಿಯ ಬೆಲ್ಲ.

ಏನಿದೆಯೊ ಇಲ್ಲವೋ ಆಸೆಯೊಂದುಂಟು
ಬಾನಿನಲಿ ಹೊಸ ಸೂರ್ಯ ಬರುವ ಮಾತುಂಟು
ಸಂಜೆಯಲಿ ಮಿಂಚಿದರೆ ಅಂಚುಗಳ ಬಣ್ಣ
ಕಪ್ಪಾದರೂ ಮುಗಿಲು ಜರಿಸೀರೆಯಣ್ಣ .

ನೆನಪುಗಳ ಜೋಲಿಯಲಿ ತೂಗುವುದು ಮನಸು
ಕಟ್ಟುವುದು ಮಾಲೆಯಲಿ ಹೊಸ ಹೊಸಾ ಕನಸು
ನನಸಾಗದಿದ್ದರೂ ಕನಸಿಗಿದೆ ಘನತೆ
ತೈಲ ಯಾವುದೆ ಇರಲಿ ಉರಿಯುವುದು ಹಣತೆ